ಬಲೂಚಿಸ್ತಾನ -
	 ಪಾಕಿಸ್ತಾನದ ನೈಋತ್ಯ ಭಾಗದಲ್ಲಿರುವ ಪ್ರಾಂತ್ಯ. ಇದರ ಉತ್ತರದಲ್ಲಿ ಆಫ್ಘಾನಿಸ್ತಾನ, ಪೂರ್ವದಲ್ಲಿ ಪಾಕಿಸ್ತಾನದ ವಾಯವ್ಯ ಗಡಿ ಪ್ರಾಂತ್ಯ, ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳು, ದಕ್ಷಿಣದಲ್ಲಿ ಅರಬ್ಬಿ ಸಮುದ್ರ, ಪಶ್ಚಿಮದಲ್ಲಿ ಇರಾನ್ ಇವೆ. ವಿಸ್ತೀರ್ಣ: 3,47,188 ಚ.ಕಿಮೀ. ಪಾಕಿಸ್ತಾನದ ಪ್ರಾಂತ್ಯಗಳಲ್ಲೆಲ್ಲ ಈ ಪ್ರಾಂತ್ಯ ದೊಡ್ಡದಾದರೂ ಇದರ ಜನಸಾಂದ್ರತೆ ಕಡಿಮೆ. ಜನಸಂಖ್ಯೆ 65,11,358 (1998).  ಮುಖ್ಯ ಪಟ್ಟಣ ಕ್ವೆಟ್ಟ. ಕ್ವೆಟ್ಟ ಜನಸಂಖ್ಯೆ 560307.

	ಭೌತಲಕ್ಷಣ: ಬಲೂಚಿಸ್ಥಾನದಲ್ಲಿ ನಾಲ್ಕು ಭೌಗೋಳಿಕ ವಿಭಾಗಗಳಿವೆ : 1 ಮಧ್ಯ ಹಾಗೂ ಈಶಾನ್ಯ ಭಾಗಗಳ ಮಲೆನಾಡು. ಇದಕ್ಕೆ ಖೊರಾಸಾನ್ ಎಂದು ಹೆಸರಿದೆ. ಈ ಪ್ರದೇಶದ ಪೂರ್ವ ಭಾಗದಲ್ಲಿ ಸುಲೇಮಾನ್ ಪರ್ವತಗಳೂ ವಾಯುವ್ಯ ಭಾಗದಲ್ಲಿ ತೋಬ ಕಾಕರ್ ಬೆಟ್ಟಗಳೂ ಇವೆ. ಸುಲೇಮಾನ್ ಶ್ರೇಣಿಗಳ ಮಧ್ಯಭಾಗದಲ್ಲಿರುವ ಕೈಸರ್‍ಫರ್ ಶಿಖರ ಸಮುದ್ರ ಮಟ್ಟಕ್ಕೆ 3,411 ಮೀ ಎತ್ತರದಲ್ಲಿದೆ. ಸುಲೇಮಾನ್ ಪರ್ವತಗಳಿಂದ ಅನೇಕ ಬೆಟ್ಟಚಾಚುಗಳು ಪಶ್ಚಿಮಕ್ಕೆ ಕ್ವೆಟ್ಟ-ಫಿಷೀನ್ ಪ್ರದೇಶದ ಕಡೆಗೆ ಸಾಗಿವೆ. ಈ ಭಾಗದ ಶಿಖರಗಳಲ್ಲಿ ಅತ್ಯಂತ ಎತ್ತರವಾದವು ಖಲೀಫತ್ (3,485 ಮೀ.), ಮತ್ತು ಕ್ವೆಟ್ಟದ ಈಶಾನ್ಯದಲ್ಲಿರುವ ಜರ್‍ಗೂನ್ (3,578 ಮೀ), 2 ಬೋಲನ್ ಮತ್ತು ಖೋಜಕ್ ಕಣಿವೆಗಳಿಂದಾದ ಮಹಾತೆರಪು: ಇದು ಉತ್ತರದ ಮಲೆನಾಡನ್ನೂ ದಕ್ಷಿಣದ ಇಳುಕಲು ಪ್ರದೇಶವನ್ನೂ ಪ್ರತ್ಯೇಕಿಸಿದೆ. ದಕ್ಷಿಣದ ಇಳಿಜಾರಿನಲ್ಲಿ ಸುಲೇಮಾನ್ ಶ್ರೇಣಿಯ ಪೂರ್ವ ಚಾಚುಗಳೂ ಪಶ್ಚಿಮದಲ್ಲಿ ಮಕ್ರಾನ್, ಖಾರಾನ್ ಮತ್ತು ಚಾಗೈ ಬೆಟ್ಟಗಳೂ ಆಗ್ನೇಯದಲ್ಲಿ ಪಬ್ ಮತ್ತು ಕೀರ್ತರ್ ಬೆಟ್ಟಗಳೂ ಹಬ್ಬಿವೆ. 3 ಕರಾವಳಿ: ಸಮುದ್ರ ತೀರದ ಸಮತಲ ಭೂಮಿ ಉತ್ತರದ ಬೆಟ್ಟಗಳ ಕಡೆಗೆ ಹಬಿದೆ. ಪೂರ್ವ ಭಾಗದಲ್ಲಿ ಇದು ಕೀರ್ತರ್ ಬೆಟ್ಟಸಾಲುಗಳ ಅಂಚಿನಲ್ಲಿ ಸಾಗಿ ಉತ್ತರದ ಸಿಬಿ ಪ್ರದೇಶದವರೆಗೂ ಹರಡಿದೆ. 4 ವಾಯವ್ಯದಲ್ಲಿರುವ ಚಾಗೈ, ಖಾರಾನ್ ಮತ್ತು ಮಕ್ರಾನ್ ಮರಳು ಗಾಡುಗಳು ಹಾಗೂ ಆಫ್ಘಾನಿಸ್ತಾನದ ಲೋರಾ ಜವುಗು ಪ್ರದೇಶ.

	ಮೇಲ್ಮೈ ಲಕ್ಷಣಕ್ಕನುಗುಣವಾಗಿ ನೆಲ ವೈವಿಧ್ಯಮಯವಾಗಿದೆ. ನಾಡಿನ ಬಹುಭಾಗ ಮರುಭೂಮಿಯಿಂದ ಕೂಡಿದೆ. ಕರಾವಳಿ, ಜವುಗು ಹಾಗೂ ಸರೋವರ ಭಾಗಗಳಲ್ಲಿ ಚೌಳು ಮಣ್ಣಿದೆ. ಮೈದಾನದ ಕೆಲವು ಕಡೆ ಮರಳು ಮಿಶ್ರವಾದ ಮಣ್ಣೂ ಬೆಟ್ಟಗಳ ನಡುವಣ ಬೆಂಗಾಡುಗಳಲ್ಲಿ ಪುಡಿಗಲ್ಲು ಮಿಶ್ರವಾದ ಮಣ್ಣೂ ಇವೆ. ಸಿಬಿ, ಕಚ್ಚಿ ಹಾಗೂ ಲಾಸ್ ಬೇಲಾ ಬಯಲುಗಳು ಮೆಕ್ಕಲು ಮಣ್ಣಿನಿಂದ ಕೂಡಿವೆ.

	ಉತ್ತರದ ಪರ್ವತ ಪ್ರದೇಶದ ನದಿಗಳು ಸಿಂಧೂ ನದಿಯನ್ನು ಕೂಡುತ್ತವೆ. ಪ್ರಾಂತ್ಯದ ಮಧ್ಯಭಾಗದಲ್ಲಿ ಹುಟ್ಟುವ ನದಿಗಳು ದಕ್ಷಿಣಕ್ಕೆ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತವೆ. ಜ್ಹೊಹೀಬ್, ನಾರಿ, ದಷ್ತ್, ಹಿಂಗೋಲ್, ಪೊರಾಲಿ, ಹಬ್ ಇವು ಇಲ್ಲಿ ಹರಿಯುವ ನದಿಗಳು.

	ವಾಯುಗುಣ: ಬಲೂಚಿಸ್ತಾನದ ವಾಯುಗುಣ ಮೂರು ಬಗೆ 1 ಅರಬ್ಬಿ ಸಮುದ್ರ ತೀರಭಾಗದಲಿ ಸಮಶೀತೋಷ್ಣ ವಾಯುಗುಣವಿದೆ. ಅಲಿಯ ಮಾಧ್ಯವಾರ್ಷಿಕ ಉಷ್ಣತೆ 300 ಸೆಂ. 2 ಒಳನಾಡಿನ ಮರಳ್ಗಾಡು ಹಾಗೂ ಬಂಜರು ಪ್ರದೇಶಗಳ ಉಷ್ಣತೆ 370 ಸೆಂ. ಇಲ್ಲಿ ಬೇಸಗೆಯಲ್ಲಿ ಹೆಚ್ಚು ಸೆಕೆ. ಆಗ ಇಲ್ಲಿಯ ಗರಿಷ್ಠ ಉಷ್ಣತೆ 500 ಸೆಂ. 3 ಪರ್ವತ ಪ್ರದೇಶಗಳು ಹೆಚ್ಚು ತಂಪು. ಅಲ್ಲಿಯ ವಾರ್ಷಿಕ ಸರಾಸರಿ ಉಷ್ಣತೆ 240 ಸೆಂ. ಕಲಾತ್ ಮತ್ತು ಕ್ವೆಟ್ಟ-ಫಿಷೀನ್ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಅತಿಯಾದ ಚಳಿ ಇರುತ್ತದೆ, ಆಗ ಅಲ್ಲಿ ಹಿಮ ಬೀಳುತ್ತದೆ.

	ಮಳೆ ನಿರ್ದಿಷ್ಟ. ಅಲ್ಪ. ವಾರ್ಷಿಕ ಮಳೆ ತೀರ ಪ್ರದೇಶದಲ್ಲಿ 102-280 ಮಿಮೀ. ಪರ್ವತ ಸೀಮೆಯಲ್ಲಿ 150-406 ಮಿಮೀ.

	ಸಸ್ಯ ಪ್ರಾಣಿವರ್ಗ: ಕಲಾತ್, ಕ್ವೆಟ್ಟ-ಫಿಷೀನ್ ಮತ್ತು ಜಿಯಾರತ್ ಪರ್ವತ ಪ್ರದೇಶದಲ್ಲಿ ಜೂನಿಪರ್, ಪಿಸ್ಟಾಚಿಯೋ, ಆಲಿವ್, ಆಷ್, ಪೈನ್, ಪಾಪ್ಲರ್ ಮತ್ತು ವಿಲ್ಲೋ ಮರಗಳಿವೆ. ಬಯಲುಗಳಲ್ಲಿ ಕುರುಚಲು, ಜಾಲಿ, ಮುಳ್ಳುಪೊದೆಗಳು ಬೆಳೆಯುತ್ತವೆ. ಕಣಿವೆಗಳಲ್ಲಿ ನಾನಾ ಬಗೆಯ ಹಣ್ಣಿನ ಗಿಡಗಳು, ಮೂಲಿಕೆಗಳು ಇವೆ, ಜಿಯಾರತ್ ಮತ್ತು ಕಲಾತ್ ಪರ್ವತ ಸೀಮೆಯಲ್ಲಿ ಜೀರಿಗೆ, ಹಿಸಪ್ ಎಂಬ ಸುವಾಸನೆಯ ಮೂಲಿಕೆ ಇವು ಅಧಿಕ. ಇಂಗು ನೀಡುವ ಬೇರಿನ ಗಿಡಗಳು ಕೋ-ಇ-ಸುಲ್ತಾನ್ ಪ್ರದೇಶದಲ್ಲಿವೆ. ಕ್ವಾಜಾ ಅಮ್ರಾನ್ ಬೆಟ್ಟಗಳಲ್ಲಿ ವಿರೇಚಕ ಔಷಧಿಗೆ ಉಪಯೋಗಿಸುವ ರುಬರ್ಬ್ ಸಸ್ಯಗಳಿವೆ. ದಷ್ತ್ ನದಿಯ ಕಣಿವೆಗಳಲ್ಲಿ ಉತ್ತಮ ಜಾತಿಯ ಖರ್ಜೂರ ಗಿಡಗಳು ಬೆಳೆಯುತ್ತವೆ. ಖಾರಾನ್ ಹುಲ್ಲುಗಾಡಿನ ವಿಶಿಷ್ಟವಾದ ಹುಲ್ಲಿನ ಬೀಜಗಳನ್ನು ಕ್ಷಾಮಕಾಲದಲ್ಲಿ ಜನರು ಆಹಾರವಾಗಿ ಬಳಸುತ್ತಾರೆ.

	ಬಲೂಚಿಸ್ತಾನದ ಪಶ್ಚಿಮ ಬೆಟ್ಟಗಳಲ್ಲಿ ಚಿರತೆ ಹಾಗೂ ಕಪ್ಪು ಕರಡಿಗಳಿವೆ, ಮರಳ್ಗಾಡುಗಳಲ್ಲಿ ಕಾಡುಕತ್ತೆ, ಪರ್ಷಿಯನ್ ಜಿಂಕೆ, ತೋಳ ಇವೆ. ಅರಣ್ಯಗಳಲ್ಲಿ ನರಿ, ಕತ್ತೆಕಿರುಬ ಸಾಮಾನ್ಯ, ಪರ್ವತ ಪ್ರದೇಶಗಳಲ್ಲಿ ನೀಳ್ಗೊಂಬಿನ ಕಾಡುಮೇಕೆ ಮತ್ತು ಐಬೆಕ್ಸ್ ಇವೆ. ಬಲೂಚಿಸ್ತಾನ ನಾನಾ ಬಗೆಯ ಕುರಿ, ರಾಸು ಹಾಗೂ ಕುದುರೆಗಳಿಗೆ ಪ್ರಸಿದ್ಧವಾಗಿದೆ.

	ಬೇಟೆ ಹಕ್ಕಿಗಳಲ್ಲಿ ಕುವುಜುಗ ಜಾತಿಯ ಚಿಕಾರ್ ಎಂಬ ಬಣ್ಣದ ಪಕ್ಷಿಯೂ ಅದೇ ಜಾತಿಯ ಸಿಸಿ ಎಂಬ ಕಂದುಬಣ್ಣದ ಹಕ್ಕಿಯೂ ನೀಳಬಾಲದ ಷಕೂಕ್ ಹಕ್ಕಿಯೂ ಮುಖ್ಯವಾದವು, ಸರೋವರಗಳಲ್ಲಿ ನೀರುಕೋಳಿಗಳಿವೆ. ಮರುಭೂಮಿಗಳಲ್ಲಿ ನಾನಾ ಬಗೆಯ ಸರ್ಪಗಳೂ ಕೀಟಗಳೂ ಇವೆ. ಖಾರಾ ಪ್ರದೇಶಗಳಲ್ಲಿ ಕಿಂಗರ್‍ಮೊರ್ ಎಂಬ ಕೋಡುಗಳಿರುವ ಸರ್ಪವಿದೆ.

	ಜನಜೀವನ: ಬಲೂಚಿಸ್ತಾನದ ಎರಡು ಮುಖ್ಯ ಬುಡಕಟ್ಟುಗಳು ಬಲೂಚ್ ಮತ್ತು ಪಠಾಣ್. ಮೂರನೆಯದು ಪ್ರಧಾನವಾಗಿ ಸಿಂಧಿಗಳೊಂದಿಗೆ ಮಿಶ್ರಗೊಂಡ ಬಣ. ಇವಲ್ಲದೆ ಕಡಲಂಚಿನ ಪ್ರದೇಶಗಳಲ್ಲಿ ಮೇದ್ ಬಣದ ಜನರೂ, ಬಲೂಚರ ನೆಲೆಗಳ ಕಡೆ ಲೂರ್ ಎಂಬ ಜನರೂ, ಸಿಬಿ ಕಚ್ಚಿ ಹಾಗೂ ಲಾಸ್‍ಬೇಲಾ ಜಿಲ್ಲೆಗಳಲ್ಲಿ ಜಾಳ್ ಜನರೂ ವಾಸವಾಗಿದ್ದಾರೆ.

/	ಪಠಾಣದಲ್ಲಿ 13 ಒಳಪಂಗಡಗಳಿವೆ. ಅವರು ತುರ್ಕಿ-ಇರಾನ್ ಮೂಲದವರೆಂದೂ ಅವರ ಪ್ರಾಚೀನ ನೆಲೆ ಸುಲೇಮಾನ್ ಪರ್ವತ ಶ್ರೇಣಿಯ ಪಶ್ಚಿಮಕ್ಕಿರುವ ಉತ್ತರ ಬಲೂಚಿಸ್ತಾನವೆಂದೂ ಹೇಳಲಾಗಿದೆ. ಈಗಲೂ ಪಠಾಣರೂ ಹೆಚ್ಚಾಗಿರುವುದು ಜೋಬ್, ಲೋರಾಲೈ ಮತ್ತು ಕ್ವೆಟ್ಟ-ಫಿಷೀನ್ ಜಿಲ್ಲೆಗಳಲ್ಲಿ.

	ಬಲೂಚಿಸ್ತಾನದ ಜನ ಹೆಚ್ಚಾಗಿ ನೆಲೆಸಿರುವುದು ಕಲಾತ್ ವಿಭಾಗ ಹಾಗೂ ಸಿಬಿ ಮತ್ತು ಪಶ್ಚಿಮ ಲೋರಾಲೈ ಜಿಲ್ಲೆಗಳಲ್ಲಿ. ಬಲೂಚರ ಉಪ ಪಂಗಡಗಳಲ್ಲಿ ಭಾಷಾವ್ಯತ್ಯಾಸಗಳಿವೆ.

	ಬಲೂಚಿಸ್ತಾನದ ಬಂಜರು ಹಾಗೂ ಅರೆಬೆಂಗಾಡಿನ ಗ್ರಾಮ ಪ್ರದೇಶಗಳಲ್ಲಿ ಅಲೆಮಾರಿ ಜನರು ಮಳೆಗಾಲದಲ್ಲಿ ಬಂದು ವಾಸಿಸುತ್ತಾರೆ. ಅಲ್ಲಿಯ ಹುಲ್ಲುಬಯಲುಗಳು ಅವರು ಜಾನುವಾರುಗಳಿಗೆ ಆಗ ಅನುಕೂಲವಾಗಿರುತ್ತವೆ. ಸಮುದ್ರ ತೀರದಲ್ಲಿ ಬೆಸ್ತರ ಗ್ರಾಮಗಳಿವೆ. ಒಳಗಾಡಿನ ಗಣಿಗಳಲ್ಲಿ ಕೆಲಸ ಮಾಡಲು ಅವಕಾಶವಿದ್ದರೂ ಬಹುಮಂದಿ ನೆಲೆನಿಲ್ಲದೆ ಅಲೆಮಾರಿ ಜೀವನವನ್ನು ನಡೆಸುತ್ತಾರೆ. 1947ರ ತರುವಾಯ ಕೈಗಾರಿಕೆಗಳ ಸ್ಥಾಪನೆಯಿಂದಲೂ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳಿಂದಲೂ ಪಟ್ಟಣಗಳಲ್ಲಿ ಜನಸಾಂದ್ರತೆ ಹೆಚ್ಚಿತು. ಪ್ರಮುಖ ಪಟ್ಟಣಗಳು ಕ್ವೆಟ್ಟ (ರಾಜಧಾನಿ) ಸಾಂಡೆಮನ್ ಕೋಟೆ, ಹಿಂದೂಬಾಗ್, ಚಮನ್, ಮಸ್ತುಂಗ್, ಮಚ್, ಸಿಬಿ, ಕಲಾತ್, ಖುಜ್‍ದಾಸ್, ಬಂಜ್ಗೂರ್, ತರ್ಬೆತ್, ಬೇಲ, ಸೋನ್‍ಮೈಯಾನಿ ಮತ್ತು ಗ್ವಾದಾರ್.

	ಭಾಷೆ: ಬಲೂಚಿಸ್ತಾನದಲ್ಲಿ ಹಲವಾರು ಭಾಷೆಗಳು ಪ್ರಚಲಿತವಾಗಿವೆ. ಬಹುಮಂದಿ ಎರಡು ಭಾಷೆಗಳನ್ನು ತಿಳಿದವರು. ಬಲೂಚಿ, ಬ್ರಾಹುಯಿ ಮತ್ತು ಸಿಂಧಿ-ಇವು ಕಲಾತ್ ವಿಭಾಗದ ಮುಖ್ಯ ಭಾಷೆಗಳು, ಪುಷ್ಟೊ, ಬಲೂಚಿ, ಸಿಂಧಿ ಮತ್ತು ಸೆರೈಕಿ ಭಾಷೆಗಳು ಕ್ವೆಟ್ಟ ವಿಭಾಗದಲ್ಲಿ ಪ್ರಧಾನವಾಗಿವೆ. ಕಲಾತ್ ಮತ್ತು ಮಸ್ತುಂಗ್ ಪ್ರದೇಶಗಳ ದ್ಹೆವಾರರು ಪಾರಸಿ ವರ್ಗದ ದ್ಹೆವಾರಿ ಭಾಷೆಯನ್ನಾಡುತ್ತಾರೆ. ನಗರ ಪ್ರದೇಶಗಳಲ್ಲಿ ನೆಲೆಸಿರುವ ಪಂಜಾಬಿ ಜನರು ಪಂಜಾಬಿ ಭಾಷೆಯನ್ನಾಡುತ್ತಾರೆ. ಉರ್ದು ಬಲೂಚಿಸ್ತಾನದ ವ್ಯವಹಾರ ಭಾಷೆ.

	ಧರ್ಮ: ಬಲೂಚರು ಹಾಗೂ ಪಠಾಣರಲ್ಲಿ ಬಹುಮಂದಿ ಸುನ್ನಿ ಮುಸಲ್ಮಾನರು. ಮಕ್ರಾನ್ ಮತ್ತು ಲಾಸ್ ಬೇಲಾ ಜಿಲ್ಲೆಗಳ ಬಲೂಚಿ ಬಣಗಳಲ್ಲಿ ಅನೇಕರು ಜೌನ್‍ಪುರದ ಮಿರಾನ್ ಮಹಮದ್ ಮಹದೀ ಎಂಬ 16ನೆಯ ಶತಮಾನದ ಸಂತನ ಅನುಯಾಯಿಗಳಾಗಿದ್ದು ತಮ್ಮದೇ ಧರ್ಮಪಂಥವನ್ನು ಸ್ಥಾಪಿಸಿಕೊಂಡಿದ್ದಾರೆ. ಕ್ವೆಟ್ಟದಲ್ಲಿ ಕೆಲವು ಹಿಂದು, ಪಾರಸಿ ಮತ್ತು ಕ್ರೈಸ್ತಜನರು ನೆಲೆಸಿದ್ದಾರೆ.

	ಇತಿಹಾಸ: ಬಲೂಚಿಸ್ತಾನದಲ್ಲಿ ಪ್ರಾಗಿತಿಹಾಸಕಾಲದ ಶಿಲಾಯುಗ ಹಾಗೂ ಕಂಚಿನಯುಗಗಳ ಅವಶೇಷಗಳು ಸಿಕ್ಕಿವೆ. ಕ್ವೆಟ್ಟ, ಟಾಗ್ರೊ, ಕುಲ್ಲಿ, ಮತ್ತು ನಾಲೆ-ಈ ಸ್ಥಳಗಳಲ್ಲಿ ನೆಲೆಸಿದ್ದ ಜನರ ಉನ್ನತ ಸಂಸ್ಕøತಿ ದಕ್ಷಿಣ ಏಷ್ಯ ಮತ್ತು ಪಶ್ಚಿಮ ಏಷ್ಯ ಪ್ರದೇಶಗಳ ಸಂಸ್ಕøತಿಗಳಿಗೆ ಸಂಪರ್ಕ ಕಲ್ಪಸಿತ್ತು. ಬಲೂಚಿ ಪ್ರದೇಶದ ಪ್ರಾರಂಭಿಕ ಇತಿಹಾಸದ ಬಗ್ಗೆ ಮಾಹಿತಿಗಳಿಲ್ಲ. ಅದು ಅಸಿರಿಯ ಮತ್ತು ಮಿಡಿಯಗಳಿಗೆ ಅಧೀನವಾಗಿತ್ತೆಂದು ಅಭಿಪ್ರಾಯಪಡಲಾಗಿದೆ. ಪರ್ಷಿಯದ ಸಮ್ರಾಟ 2ನೆಯ ಡೇರಿಯಸ್ (ಕ್ರಿ.ಪೂ. 521-486) ಇದನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಅಲೆಗ್ಸಾಂಡರ್ ಕ್ರಿ.ಪೂ. 330ರಲ್ಲಿ 3ನೆಯ ಡೇರಿಯಸನನ್ನು ಸೋಲಿಸಿ ಬಲೂಚಿ ಪ್ರದೇಶವನ್ನು ಗ್ರೀಕ್ ಆಡಳಿತಕ್ಕೊಳಪಡಿಸಿದ. ಆಗ ಬಲೂಚಿಸ್ತಾನ ಗೆಡ್ರೋಹಿಯಾದ ಭಾಗವಾಗಿತ್ತು. ಅಲೆಗ್ಸಾಂಡರನ ತರುವಾಯ ಇದು 1ನೆಯ ಸೆಲ್ಯೂಕಸ್ ಮತ್ತು ಚಂದ್ರಗುಪ್ತಮೌರ್ಯ, ಇಂಡೋ-ಗ್ರೀಕರು ಹಾಗೂ ಪಾರ್ಥಿಯನರು (ಕ್ರಿ.ಪೂ. 3ನೆಯ ಶತಮಾನದ-2ನೆಯ ಶತಮಾನ). ಸಿಥಿಯನರು (ಕ್ರಿ.ಪೂ. 100-ಕ್ರಿ.ಶ. 200)-ಇವರ ರಾಜಕೀಯ ಪ್ರಾಬಲ್ಯಕ್ಕೆ ಒಳಪಟ್ಟಿತ್ತು. ಬಲೂಚಿಸ್ತಾನದ ಮಧ್ಯ ಹಾಗೂ ಈಶಾನ್ಯ ಭಾಗಗಳು 470 ರಿಂದ 520ರ ವರೆಗೆ ತುರ್ಕಿ ಜನರ ಹಾಗೂ 3ರಿಂದ 7ನೆಯ ಶತಮಾನಗಳವರೆಗೆ ಪರ್ಷಿಯದ ಸಸಾನೀಡ್ ಮನೆತನದವರ ವಶದಲ್ಲಿದ್ದುವು. 7ನೆಯ ಶತಮಾನದ ಕೊನೆಯ ಹೊತ್ತಿಗೆ ಸಸಾನೀಡರ ಬಲ ಕುಗ್ಗಲು ಸಿಂಧ್ ಪ್ರದೇಶದ ಆರ್ಯರು ಬಲೂಚಿಸ್ತಾನದ ಮೇಲೆ ಪ್ರಭುತ್ವ ಸ್ಥಾಪಿಸಿದರು. ತರುವಾಯ ಅರಬ್ಬರ ಆಕ್ರಮಣವಾಯಿತು. 711ರಲ್ಲಿ ಮಹಮ್ಮದ್-ಬಿನ್-ಅಲ್‍ಖಾಸಿಂ ಈ ನಾಡನ್ನು ಗೆದ್ದ. ಅಮೇಲೆ ಇದು ಊಮೈಯದ್ ಮತ್ತು ಅಭಾಸಿದ್ ಆಡಳಿತಕ್ಕೆ ಸೇರಿದ್ದ ಸಿಂಧ್ ಪ್ರಾಂತ್ಯದ ಭಾಗವಾಯಿತು. 11ನೆಯ ಶತಮಾನದಲ್ಲಿ ಇದು ವಿವಿಧ ಆಡಳಿತಗಳ ಪಾಲಾಗಿ 1595-1638ರಲ್ಲಿ ಮೊಗಲ್ ಸಾಮ್ರಾಜ್ಯಕ್ಕೆ ಸೇರಿತ್ತು.

	ಬಲೂಚಿಸ್ತಾನಕ್ಕೆ ಮೊದಲು ಬಂದು ನೆಲೆಸಿದವರು ಬ್ರಾಹುಯಿಗಳು. 14ನೆಯ ಶತಮಾನದ ಹೊತ್ತಿಗೆ ಅವರು ಬಲೂಚಿಸ್ತಾನದ ಮಧ್ಯಭಾಗದಲ್ಲಿ ಕಲಾತ್ ಪಾಳೆಯವನ್ನು ಕಟ್ಟಿಕೊಂಡರು. 18ನೆಯ ಶತಮಾನದಲ್ಲಿ ರೀಂದರು ಸಿಬಿ ರಾಜ್ಯವನ್ನು ಕಟ್ಟಿದರು. ಅದಕ್ಕೆ ರಾಜಧಾನಿ ಫಾತೆಪುರ್‍ಲಾಷಾರ್ ಬುಡಕಟ್ಟಿನವರು ಕ್ವೆಟ್ಟ ರಾಜ್ಯವನ್ನು ಸ್ಥಾಪಿಸಿದರು. ಅದರ ರಾಜಧಾನಿ ಗಂಡಾವ. 1490-1520ರಲ್ಲಿ ನಡೆದ ರೀಂದ್-ಲಾಷ್‍ರ್ ಯುದ್ಧದಿಂದ ರೀಂದ್ ಮತ್ತು ಲಾಷಾರ್ ಜನರಲ್ಲಿ ಬಹುಮಂದಿ ಪಂಜಾಬ್ ಸಿಂಧ್ ಮತ್ತು ಗುಜರಾತ್ ಪ್ರದೇಶಗಳಿಗೆ ಹೋಗಿ ನೆಲೆಸಿದರು.

	1666ರ ಹೊತ್ತಿಗೆ ಬ್ರಾಹುಯಿ ಬಲೂಚರು ತಮ್ಮ ಪ್ರಭುತ್ವವನ್ನು ಕಲಾತ್ ರಾಜ್ಯದಲ್ಲಿ ಮತ್ತೆ ಸ್ಥಾಪಿಸಿದರು. ಅವರಲ್ಲಿ ಪ್ರಸಿದ್ಧನಾದ ನಜಿûೀರ್ ಖಾನ್ (1750-93) ವಿವಿಧ ಬುಡಕಟ್ಟುಗಳ ಜನರ ಪ್ರದೇಶಗಳನ್ನು ಸಂಘಟಸಿ ರಾಜಕೀಯ ಹಾಗೂ ಸಾಮಾಜಿಕ ಸಂಸ್ಥೆಗಳನ್ನು ರೂಪಿಸಿದ. ಬಲೂಚಿ ಸೈನ್ಯವನ್ನು ಬಲಗೊಳಿಸಿದ. ಪರ್ಷಿಯದ ನಾದಿರ್ ಷಾ. ಆಫ್ಘಾನಿಸ್ತಾನದ ಅಹಮದ್ ಷಾ ದುರಾನಿ ಇವರಿಬ್ಬರೊಡನೆ ಮೈತ್ರಿ ಬೆಳೆಸಿ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿದ.

	1875ರಲ್ಲಿ ಬಲೂಚಿಸ್ತಾನದಲ್ಲಿ ಬ್ರಿಟಿಷರ ಪ್ರಭಾವ ಹೆಚ್ಚಿತು. ಬ್ರಿಟಿಷರು 1877ರಲ್ಲಿ ಕ್ವೆಟ್ಟ ನಗರವನ್ನು ಆಕ್ರಮಿಸಿದರು. ಆಫ್ಘನ್‍ಯುದ್ಧ (1878-79) ನಡೆದ ಮೇಲೆ ಬ್ರಿಟಿಷರು ಆಫ್ಘಾನಿಸ್ತಾನದೊಂದಿಗೆ ಒಪ್ಪಂದ ಮಾಡಿಕೊಂಡುದಲ್ಲದೆ ಕಲಾತ್ ಪ್ರಾಂತ್ಯದ ಪಾಳೆಯಗಾರರೊಡನೆ ಕರಾರು ಮಾಡಿಕೊಂಡು ತಾವು ಪಡೆದುಕೊಂಡ ಬಲೂಚಿ ಪ್ರದೇಶಗಳನ್ನು ಕೂಡಿಸಿ ಬ್ರಿಟಿಷ್ ಬಲೂಚಿಸ್ತಾನ ಹಾಗೂ ಬಲೂಚಿ ಬುಡಕಟ್ಟುಗಳ ಪ್ರದೇಶವನ್ನು ಸ್ಥಾಪಿಸಿದರು (1896). ಕಲಾತ್ ಬ್ರಿಟಿಷ್ ಆಶ್ರಿತ ಸಂಸ್ಥಾನವಾಯಿತು. 1947ರಲ್ಲಿ ಬ್ರಿಟಿಷ್ ಬಲೂಚಿಸ್ತಾನ ಪಾಕಿಸ್ತಾನಕ್ಕೆ ಸೇರಿತು. ಒಂದು ವರ್ಷದ ತರುವಾಯ ಕಲಾತ್ ಸಂಸ್ಥಾನವು ಪಾಕಿಸ್ತಾನದಲ್ಲಿ ವಿಲೀನಗೊಂಡಿತು. 1970ರಲ್ಲಿ ಬಲೂಚಿಸ್ತಾನ ಈಗಿನ ರೂಪದಲ್ಲಿ ಪಾಕಿಸ್ತಾನದ ಪ್ರಾಂತ್ಯವಾಯಿತು.

	ಆಡಳಿತ: ಪಾಕಿಸ್ತಾನದ ಕೇಂದ್ರ ಸರ್ಕಾರ ನೇಮಿತ ಗವರ್ನರನ ಆಡಳಿತಕ್ಕೆ ಬಲೂಚಿಸ್ತಾನ ಒಳಪಟ್ಟಿದೆ. ಪ್ರಾಂತ್ಯದ ಎರಡು ಆಡಳಿತ ವಿಭಾಗಗಳು ಕ್ವೆಟ್ಟ ಮತ್ತು ಕಲಾತ್, ಪ್ರತಿ ವಿಭಾಗಕ್ಕೂ ಒಬ್ಬ ಪ್ರಾಧಾನ ಆಡಳಿತಾಧಿಕಾರಿಯಿರುತ್ತಾನೆ. ವಿಭಾಗಗಳನ್ನು 10 ಜಿಲ್ಲೆಗಳಾಗಿ ವಿಭಜಿಸಿ ಅವುಗಳ ಆಡಳಿತಕ್ಕೆ ಜಿಲ್ಲಾಧಿಕಾರಿಗಳನ್ನು ನೇಮಿಸಿದೆ.

	ಆರ್ಥಿಕ ಸ್ಥಿತಿ: ಮಳೆ ಅನಿರ್ದಿಷ್ಟವಾದ್ದರಿಂದ ಹಾಗೂ ನೀರಿನ ಆಭಾವದಿಂದ ವ್ಯವಸಾಯ ಪರಿಮಿತವಾದ್ದು. ಜನರು ಬಹಮಟ್ಟಿಗೆ ದನ ಕುರಿಮೇಕೆಗಳನ್ನು ಸಾಕುವ ಅಲೆಮಾರಿಗಳು, ಪ್ರಾಂತ್ಯದ ಸೇಕಡ 90ರಷ್ಟು ಮಂದಿಯ ಉದ್ಯಮ ಕುರಿ ಸಾಕಣೆ. ಉತ್ತಮ ಕುರಿ ತುಪ್ಪಟವನ್ನು ಹೊರದೇಶಗಳಿಗೆ ರಫ್ತು ಮಾಡುತ್ತಾರೆ. ಅರಣ್ಯಗಳಲ್ಲಿ ಖರ್ಜೂರ ಒಂದು ಮುಖ್ಯ ಉತ್ಪನ್ನ.

	ಅರಬ್ಬೀಸಮುದ್ರದ ಅಂಚಿನಲ್ಲಿ ಮೀನುಗಾರಿಕೆಗೆ ಸಾಕಷ್ಟು ಅವಕಾಶವಿದೆ. ಮೀನುಗಳ ಶೈತ್ಯಾಗಾರ ಗ್ವಾದರ್ ರೇವುಪಟ್ಟಣದಲ್ಲಿದೆ.

	ಕೈಗಾರಿಕೆ : ಪಾಕಿಸ್ತಾನದ ಒಟ್ಟು ಕೈಗಾರಿಕೆಯ ಉತ್ಪನ್ನದಲ್ಲಿ ಬಲೂಚಿಸ್ತಾನದ ಕೊಡುಗೆ ಸೇಕಡ 1ರಷ್ಟು ಮಾತ್ರ. 1970ರಿಂದ ಈಚೆಗೆ ಹತ್ತಿ ಮತ್ತು ಉಣ್ಣೆ ಬಟ್ಟೆ ಕಾರ್ಖಾನೆಗಳು ಬೆಳೆದಿವೆ. ಹಣ್ಣುಗಳ ಡಬ್ಬೀಕರಣ ಇನ್ನೊಂದು ಮುಖ್ಯ ಉದ್ಯಮ. ಕಸೂತಿ ಮೊದಲಾದ ಕುಶಲಕೈಗಾರಿಕೆಗಳೂ ಇವೆ.

	ಕಲ್ಲಿದ್ದಲು, ಕ್ರೋಮೇಟ್, ಸುಣ್ಣಕಲ್ಲು, ಜಿಪ್‍ಸಂ, ತಾಮ್ರ, ಸೀಸ ಮೊದಲಾದ ಖನಿಜಗಳು ಇಲ್ಲಿ ಸಿಗುತ್ತವೆ.

	ಸಾರಿಗೆ ಸಂಪರ್ಕ: ಪ್ರಾಂತ್ಯದ ರೈಲುಮಾರ್ಗಗಳ ಒಟ್ಟು ಉದ್ದ 1,600 ಕಿಮೀ. ಕ್ವೆಟ್ಟಕ್ಕೂ ಇರಾನಿನ ಜಾಹೆದಾನ್‍ಗೂ ನಡುವಣ ಮಾರ್ಗ, ಆಫ್ಘಾನಿಸ್ತಾನದ ಗಡಿಯ ಭಾಗದ ಚಮನ್ ಮಾರ್ಗ, ಚೋಲನ್ ಕಣಿವೆಯಿಂದ ಕರಾಚಿ ಮತ್ತು ಲಾಹೋರ್ ಪಟ್ಟಣಗಳಿಗೆ ಹೋಗುವ ಸಿಬಿ ಮಾರ್ಗ, ಉತ್ತರದ ಸಾಂಡೆಮನ್ ಕೋಟೆ ಮಾರ್ಗ. ಈಶಾನ್ಯದ ಲೋರಾಲೈ ಮಾರ್ಗ ಇವು ಮುಖ್ಯವಾದವು.

	ರಸ್ತೆಗಳ ಒಟ್ಟು ಉದ್ದ ಸುಮಾರು 11,200 ಕಿಮೀ. ಇರಾನ್ ಕಡೆಗೆ ಹೋಗುವ ಕ್ವೆಟ್ಟ-ಮೀರ್‍ಜಾವೆಲ್ ರಸ್ತೆ, ಕರಾಚಿ ಮತ್ತು ಲಾಹೋರ್ ನಗರಗಳಿಗೆ ಹೋಗುವ ಕ್ವೆಟ್ಟ-ಸಿಬಿ ರಸ್ತೆ ಇವು ಹಳೆಯ ಪ್ರಮುಖ ಹೆದ್ದಾರಿಗಳು. ಇತ್ತೀಚಿಗೆ ಪಾಕಿಸ್ತಾನ, ಇರಾನ್ ಮತ್ತು ತುರ್ಕಿ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಅಂತರರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲಾಗಿದೆ.

ಪಾಕಿಸ್ತಾನದ ವಿಮಾನಗಳು ಕ್ವೆಟ್ಟದಿಂದ ಕರಾಚಿ, ಲಾಹೋರ್ ಮತ್ತು ರಾವಲ್ ಪಿಂಡಿ ನಗರಗಳಿಗೆ ಸಂಚರಿಸುತ್ತೇವೆ. ಸಮುದ್ರತೀರದಲ್ಲಿದ್ದ ಸೊನ್‍ಮಿಯನಿ, ಜೀವಾನಿ, ಪಸ್ನಿ ಮತ್ತು ಗ್ವಾದರಗಳಿಗೂ ಕರಾಚಿಗೂ ನಡುವೆ ಹಡಗುಗಳ ಸಂಚಾರವಿದೆ.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ